ಮಂಗಳವಾರ, ಜುಲೈ 2, 2024

ಗಜಲ್ | ಹಾಜರಿ ಇಲ್ಲದೆ | ವೆಂಕಟೇಶ ಚಾಗಿ

  



**ಗಜಲ್**

ಮಳೆ ಸುರಿಸದೇ ಮೇಘವು ಹಠ ಹಿಡಿದಾಗಿದೆ ನಿನ್ನ ಹಾಜರಿ ಇಲ್ಲದೆ
ಕಾಮನಬಿಲ್ಲಿನ ಬಣ್ಣಗಳು ಬಣ್ಣ ಕಳೆದಾಗಿದೆ ನಿನ್ನ ಹಾಜರಿ ಇಲ್ಲದೆ


ಸೋನೆ ಮಳೆಯು ಮೌನರಾಗ ಹಾಡುವುದನು ಮರೆತು ಮಂಕಾಗಿದೆ
ತಂಗಾಳಿಯಲಿ ನನ್ನ ಬಿಸಿಯುಸಿರು ತಂಪಾಗಿದೆ ನಿನ್ನ ಹಾಜರಿ ಇಲ್ಲದೆ


ಕನಸುಗಳು ತುಂಬಾ ದಿನಗಳ ನಂತರ ರಜೆಯೊಳಗೆ ಮುಳುಗಿವೆ
ನನಸಾಗುವ ಕನಸುಗಳು ಶುಭ ಗಳಿಗೆಯ ಮರೆತಾಗಿದೆ ನಿನ್ನ ಹಾಜರಿ ಇಲ್ಲದೆ


ಹೂವಿನ ಮಕರಂದಕ್ಕಾಗಿ ಬರುವ ಬಡ ದುಂಬಿಗಳಿಗೂ ದಿಗಿಲಾಗಿದೆ
ಪರಿಮಳವು ಕೂಡ ತನ್ನ ಕಂಪು ಕಳೆದುಕೊಂಡಾಗಿದೆ ನಿನ್ನ ಹಾಜರಿ ಇಲ್ಲದೆ 


ಮುತ್ತಿನ ಹೊತ್ತು ಮೆಲ್ಲ ಮೆಲ್ಲನೆ ಜಾರಿ ಮನದನ್ನೆಯನುನು ಅಪ್ಪುತ್ತಿದೆ
ಕವಿಯ ಗುಡಿಸಲರಮನೆಯಲ್ಲೂ ಕತ್ತಲಾಗಿದೆ ನಿನ್ನ ಹಾಜರಿ ಇಲ್ಲದೆ |


=> ವೆಂಕಟೇಶ ಚಾಗಿ
Comment on WhatsApp : 9611311195)


ಸೋಮವಾರ, ಜುಲೈ 1, 2024

ಕವಿತೆ | ಬಾಡಿಗೆ ಮನೆ | ವೆಂಕಟೇಶ ಚಾಗಿ

 


**ಬಾಡಿಗೆ ಮನೆ**



ದೇವರಿಗೊಂದು ಮನೆ ಕಟ್ಟಲಾಗಿದೆ
ಅದು ಬಾಡಿಗೆ ಮನೆ
ಮನೆಯೊಳಗೋ ಮೌನ ಬರಿಮೌನ
ದೇವರು ಮಾತ್ರ ಪ್ರಸನ್ನ
ಬೆಳಕಿನಲ್ಲಿ ಬೆಳಕು ಮೂಡಿಸಿ
ದೇವರು ನಗುತ್ತಿದ್ದಾನೆ..

ಕೆಲವು ಕಣ್ಣುಗಳು ದೇವರನ್ನು ಕಂಡು
ಕಣ್ಣೀರು ಸುರಿಸುತ್ತಿವೆ
ಮತ್ತೆ ಕೆಲವು ಕಣ್ಣುಗಳು
ದೇವರ ಸೌಂದರ್ಯವನು 
ಕಣ್ಣತುಂಬ ತುಂಬಿಕೊಳ್ಳುತ್ತಿವೆ

ಬಾಡಿಗೆ ಮನೆಯ ತುಂಬಾ
ಆಸೆ ಆಮೀಷಗಳು ತುಂಬಿ ತುಳುಕುತಿವೆ
ದೇವರಿಗಷ್ಟೇ ಅಲ್ಲ
ಉಸಿರಾಡುವ ಕಲ್ಲುಗಳಲ್ಲೂ ಸಹ
ಗೋಡೆಯ ಮೇಲಿನ ಬಡವರು
ನಗುತ್ತಾ ನಗುತ್ತಾ ಅಳುತ್ತಿದ್ದಾರೆ

ಗ್ರಹಣ ಗ್ರಹಗತಿಗಳು
ಕಳ್ಳಕಾಕರೆಂದರೆ ದೇವರಿಗೂ ಭಯ
ನಗ ನಾಣ್ಯಗಳ ವ್ಯಾಮೋಹ
ಮುನಿಸು ಸಂತೃಪ್ತಿಗಳು ಮತ್ತಷ್ಟು
ಬಾಡಿಗೆ ಮನೆಗೊಮದು ದೊಡ್ಡಬೀಗ
ಆದರೂ ದೇವರಿಗೆ ಸಾಂತ್ವಾನ 
ದೇವರು ಎಲ್ಲೆಡೆಯೂ ಇದ್ದಾನೆ

ರೋಗ ರುಜಿನಗಳು
ದೇವರಿಗೂ ಬರಬಹುದು
ದೇವರಿಗೆ ಮಾತ್ರ ಪರಿಶುದ್ಧತೆಯ ಕಾಳಜಿ
ಮೊರೆಯಿಡುವ ಖಾಲಿಕೈಗಳು
ನೂರಾರು ಸಾವಿರಾರು
ದೇವರು ಮಾತ್ರ ಸದಾ ಹಸನ್ಮುಖಿ
ತನ್ನ ಮನೆಗೆ ತಾನೇ ಬಾಡಿಗೆ ಕಟ್ಟುತ..

ದೇವರಿಗೂ ನಿಯಮಗಳ ಬಂಧನ
ಸಂಸಾರದ ತಾಪತ್ರಯಗಳಿಗಿಂತಲೂ
ಬಾಡಿಗೆ ಮನೆಯೊಳಗೆ ಅಧಿಕ
ದೇವರು ಎಲ್ಲವನೂ ಮರೆತಂತಿದೆ
ಇತಿಹಾಸದ ಪುಟಗಳಲ್ಲಿ ಅಮರ
ಮತ್ತೆ ಹೊಸ ಹುಟ್ಟು ಹೊಸ ಹೆಸರು
ಅದೇ ಬಾಡಿಗೆ ಮನೆಯಲ್ಲಿ..



ವೆಂಕಟೇಶ ಚಾಗಿ

ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ

    ***ಪುಟ್ಟನ ಗಾಡಿ*** ( ಮಕ್ಕಳ   ಕವನ ) ಪುಟ್ಟನ ಗಾಡಿ ಹೊರಟಿದೆ ನೋಡಿ ಬುರ್ ಬುರ್ ಗಾಡಿ ಮಾಡಿದೆ ಮೋಡಿ || ಚಾಲಕ ಇವನೆ ಪಯಣಿಗ ಒಬ್ಬನೆ ನಿಲ್ದಾಣ ನಮ್ಮನೆ ಹೊರಟಿತು ಮ...