ಬುಧವಾರ, ಮೇ 29, 2024

ಕವಿತೆ | ಗಡಿ | ವೆಂಕಟೇಶ ಚಾಗಿ

 


*ಗಡಿ*


ಬೆಳೆಯುತ್ತಿವೆ ಊರುಗಳು

ದಿನದಿಂದ ದಿನಕ್ಕೆ 

ಸಮಯ ಉರುಳಿದಂತೆ!

ಬೆಳೆಯುವ ಭೂವಿಯ
ನೂರಾರು ಭಾಗ ಮಾಡಿ
ಹಣದ ಆಸೆಗೆ 
ಅವರಿವರಿಗೆ ಮಾರಿ
ಸೈಟುಗಳ ಸ್ಲೇಟುಗಳು ಒಡೆದು
ವಿರಳವಾಗುತ್ತಿವೆ ಮನೆಗಳು
ಮತ್ತೊಂದಿಷ್ಟು ಮನಗಳು..!
ಬಿತ್ತಿ ಬೆಳೆಯುವ ಕೈಗಳು
ಕೆಸರಾಗಲು ಹಿಂಜರಿದಿವೆ;

ತಂಪು ಜೈಲಿನಲಿ 
ಮೆತ್ತನೆಯ ಕುರ್ಚಿಯಲಿ ಕುಳಿತು
ಹಾಯಾದ ಕನಸು ಕಾಣುವ
ಕನಸುಗಳು ಹುಟ್ಟಿವೆ 
ಕಸದಂತೆ ಮನದೊಳಗೆ ;

ದೊಡ್ಡ ಮನೆಗಳಲ್ಲಿ
ಸಣ್ಣ ಸಣ್ಣ ಮನಸುಗಳು,
ಅನಾಥ ಭಾವನೆಯು ಬೆಳೆಯುತಿತೆ
ಬೇರೇನು ಬೆಳೆಯದೆ.‌;
ಆ ಅಂಗಡಿಗಳಲ್ಲಿ ಸಿಗುವುದಂತೆ
ಮನಕೆ ಬೇಕಾಗುವಷ್ಟು ಖುಷಿ ;
ಅದಕೆಂದೆ ಓಡಬೇಕಿದೆ
ಸಮಯದ ಎರಡರಷ್ಟು.!

ರಾತ್ರಿಗಳೂ ಇಲ್ಲಿ ಹಗಲಂತೆ
ಬೇತಾಳದಂತೆ ಬೆನ್ನು ಹತ್ತವೆ
ಅಲ್ಪ ಆಸೆಯ 
ನೂರಾರು ಕಾರ್ಯಗಳು;

ಅದಾವುದೋ ದೊಡ್ಡ ಮನೆಗಳಲ್ಲಿ
ಹೆಣಗಳು ಸತ್ತು ಬಿದ್ದಿವೆ
ವಯಸ್ಸು ಮೀರಿ;

ಸಾವಿರಾರು ಕೆಂಪು ನೋಟುಗಳು
ಗಹಗಹಿಸಿ ನಗುತ್ತಿರುವವು
ಅಳುವವರಿಲ್ಲದೆ
ದೊಡ್ಡ ಮನೆಯ ತಿಜೋರಿಯಲ್ಲಿ ;
ನಕ್ಷತ್ರಗಳು ನಾಚುತ್ತಿವೆ
ಆ ನಗರದ ಪಂಜುಗಳಿಗೆ;

ಗಡಿಗಳು ಮೀರಿವೆ
ಮುಂದೊಂದು ದಿನ
ಸರ್ವನಾಶದ 
ವಾಸನೆಯೊಂದಿಗೆ..!!


(Comment on WhatsApp 9611311195)






ಗುರುವಾರ, ಮೇ 23, 2024

ಮಕ್ಕಳ ಕಥೆ | ಮಕ್ಕಳ ಪಾಠ | ವೆಂಕಟೇಶ ಚಾಗಿ

   




ಮಕ್ಕಳ ಪಾಠ



ಅನೇಕ ವರ್ಷಗಳ ಹಿಂದೆ ಅನಂತಪುರ ಎಂಬ ರಾಜ್ಯದಲ್ಲಿ ಸೂರ್ಯಕುಮಾರ ಎಂಬ ರಾಜ ಆಳ್ವಿಕೆ ನಡೆಸುತ್ತಿದ್ದನು. ರಾಜನು ತುಂಬಾ ಬಲಶಾಲಿಯಾಗಿದ್ದ. ತನ್ನ ರಾಜ್ಯದ ಸುತ್ತಮುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ರಾಜರನ್ನು ಸೋಲಿಸಿ ಅವರಿಂದ ಅಪಾರ ಕಪ್ಪು ಕಾಣಿಕೆಗಳನ್ನು ಹೊತ್ತು ತರುತ್ತಿದ್ದ. ಇದರಿಂದಾಗಿ ಅವನ ಖಜಾನೆಯು ಧನಕನಕಾಧಿಗಳಿಂದ ತುಂಬಿಹೋಗಿತ್ತು. ರಾಜನಿಗೆ ರಾಜ್ಯದ ಆಡಳಿತ ಹಾಗೂ ಪ್ರಜೆಗಳ ಸುಖ ದುಃಖಗಳ ಕಡೆಗೆ ಗಮನ ಹರಿಸಲು ಸಮಯವೇ ಸಿಗುತ್ತಿರಲಿಲ್ಲ. 


ಒಮ್ಮೆ ರಾಜನ ಮೇಲೆ ದೂರದ ರಾಜ್ಯದ ರಾಜನೊಬ್ಬ ದಂಡೆತ್ತಿ ಬಂದ . ಅವನ ಅಪಾರ ಸೈನ್ಯದ ಎದುರು ಸೂರ್ಯಕುಮಾರನ ಸೈನ್ಯ ಜರ್ಜರಿತವಾಯಿತು . ಸೈನಿಕರ ಮನೋಸ್ಥೈರ್ಯ ಕುಸಿಯಿತು. ಸೈನಿಕರೆಲ್ಲಾ ಜೀವಭಯದಿಂದ ದಿಕ್ಕಾಪಾಲಾಗಿ ಹೋಡಿದರು. ದಂಡೆತ್ತಿ ಬಂದ ರಾಜ ಅರಮನೆಯಲ್ಲಿದ್ದ ಖಜಾನೆಯನ್ನು ಲೂಟಿ ಮಾಡಿ ಖಜಾನೆಯಲ್ಲಿದ್ದ ಧನಕನಕಾಧಿಗಳನ್ನು ನೂರಾರು ಕುದುರೆಗಳ ಮೇಲೆ ಹೇರಿಕೊಂಡು ತನ್ನ ರಾಜ್ಯದತ್ತ ಮುಖಮಾಡಿದ. ಸೂರ್ಯಕುಮಾರ ಎಲ್ಲವನ್ನೂ ಕಳೆದುಕೊಂಡು ದಂಡೆತ್ತಿ ಬಂದ ರಾಜನಿಂದ ಪಾರಾಗಿ ಮಾರುವೇಷದಿಂದ ದೂರದ ಒಂದು ಗ್ರಾಮದತ್ತ ತೆರಳಿ ಆ ಗ್ರಾಮದ ಊರ ಹೊರಗಿನ ಒಂದು ಆಲದ ಮರವನ್ನು ಏರಿ ಕುಳಿತುಕೊಂಡ. 



ಸ್ವಲ್ಪ ಸಮಯದ ನಂತರ ಆನದ ಮರದ ಕೆಳಗೆ ಆ ಗ್ರಾಮದ ಕೆಲವು ಮಕ್ಕಳು ಬಂದು ಆಟವಾಡತೊಡಗಿದರು. ಮಕ್ಕಳ ಆಟ ತುಂಟಾಟಗಳನ್ನು ಕಂಡು ರಾಜನಿಗೆ ಖಷಿಯಾಯಿತು. ಮಕ್ಕಳೆಲ್ಲಾ ಸೇರಿ ಯುದ್ದದ ಆಟವನ್ನು ಆಡುವ ಯೋಚನೆ ಮಾಡಿದರು. ಮಕ್ಕಳು ತಮ್ಮಲ್ಲಿಯೇ ಎರಡು ಗುಂಪುಗಳನ್ನು ಮಾಡಿ ತಲಾ ಒಂದೊಂದು ಗುಂಪಿಗೆ ಒಬ್ಬ ರಾಜನ ನೇಮಕ ಮಾಡಿದರು. ಒಂದನೇ ಗುಂಪಿನ ನಾಯಕ ದಷ್ಟಪುಷ್ಟನಾಗಿದ್ದ.  ತನ್ನ ಗುಂಪಿನ ಸದಸ್ಯರಿಗೆ ತಾನು ರಾಜನೆಂದೂ ತನಗೆ ಬಹುಪರಾಕ್ ಹೇಳಬೇಕೆಂದು ಆದೇಶಿಸುತ್ತಿದ್ದ. ಎರಡನೇ ಗುಂಪಿನ ನಾಯಕ ಅಷ್ಟೇನು ದಷ್ಟಪುಷ್ಟನಾಗಿ ಇಲ್ಲದಿದ್ದರೂ ತುಂಬಾ ಚಾಣಾಕ್ಷತನಾಗಿದ್ದ. ತನ್ನ ಗುಂಪಿನ ಸದಸ್ಯರೊಂದಿಗೆ ತುಂಬಾ ಆತ್ಮೀಯತೆಯಿಂದ ಆಪ್ತವಾಗಿ ನಡೆದುಕೊಳ್ಳುತ್ತಿದ್ದ. ಇದರಿಂದಾಗಿ ಆ ಗುಂಪಿನ ಸದಸ್ಯರು ಸ್ವಯಂ ಪ್ರೇರಣೆಯಿಂದ ನಾಯಕನಿಗೆ ಜೈ ಜೈ ಎನ್ನುತ್ತಿದ್ದರು.



ಮಕ್ಕಳ ಯುದ್ದವು ಪ್ರಾರಂಭವಾಯಿತು. ಎರಡನೇ ಗುಂಪಿನ ಮಕ್ಕಳು ತಮ್ಮ ನಾಯಕನ ಪ್ರೇರಣೆಯೊಂದಿಗೆ ಒಗ್ಗಟ್ಟಿನಿಂದ ಹೋರಾಡತೊಡಗಿದರು. ಮೊದಲನೇ ಗುಂಪಿನ ನಾಯಕ ತನ್ನ ಗುಂಪಿನ ಸದಸ್ಯರನ್ನು ಹೋರಾಡಲು ಬಿಟ್ಟು ಹಿಂದೆ ಸರಿದು ಯುದ್ದ ಮಾಡಲು ಆದೇಶಿಸುತ್ತಿದ್ದ. ಮೊದಲನೇ ಗುಂಪಿನ ಮಕ್ಕಳು ತಮ್ಮ ನಾಯಕನ ಮೇಲೆ ಒಬ್ಬೊಬ್ಬರಾಗಿ ಬೇಸರಗೊಂಡು ಗುಂಪು ಬಿಟ್ಟು ಹೊರಬರತೊಡಗಿದರು. ನಾಯಕ ಮಾತ್ರ ತನ್ನ ಕಠಿಣ ಮಾತುಗಳಿಂದ ಬೇಜವಾಬ್ದಾರಿಯಿಂದ ಹೋರಾಟ ಮಾಡಲು ಹೇಳುತ್ತಿದ್ದ. ಇದರ ಪರಿಣಾಮವಾಗಿ ಮೊದಲ ಗುಂಪಿನ ನಾಯಕನ ಬಳಿ ಯಾವ ಮಕ್ಕಳೂ ಇಲ್ಲದಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು. ಎರಡನೇ ಗುಂಪಿನ ಮಕ್ಕಳು ತಾವು ಗೆದ್ದದ್ದಕ್ಕೆ ಸಂಭ್ರಮಿಸಿದರು. ನಾಯಕನನ್ನು ತಮ್ಮ ಹೆಗಲಮೇಲಿರಿಸಿಕೊಂಡು ಮೆರವಣಿಗೆ ಮಾಡಿದರು.



ಮಕ್ಕಳ ಆಟ ಮುಗಿಯಿತು. ಮರದ ಮೇಲೆ ಕುಳಿದಿದ್ದ ರಾಜನಿಗೆ ಮಕ್ಕಳ ಆಟ ಕಂಡು ತುಂಬಾ ಸಂತೋಷವಾಯಿತು. ಮರದಿಂದ ಕೆಳಗೆ ಇಳಿದು ಬಂದು ಗೆದ್ದ ನಾಯಕನಿಗೆ ಅಭಿನಂದಿಸಿ ತನ್ನ ಕೊರಳಲ್ಲಿ ಇದ್ದ ಸರವನ್ನು ಉಡುಗೊರೆಯಾಗಿ ನೀಡಿದ. ನಂತರ ಮಕ್ಕಳನ್ನು ಉದ್ದೇಶಿಸಿ, " ಮಕ್ಕಳೇ, ನೀವು ನನಗೆ ಒಳ್ಳೆಯ ಪಾಠ ಹೇಳಿಕೊಟ್ಟಿರಿ. ನಿಮ್ಮ ಪಾಠ ನನ್ನ ಮುಂದಿನ ದಿನಗಳಿಗೆ ದಾರಿದೀಪವಾಗಲಿದೆ. ನಿಮ್ಮ ನಾಯಕನ ಗುಣಗಳನ್ನು ನಾನೂ ಅಳವಡಿಸಿಕೊಳ್ಳುತ್ತೇನೆ" ಎಂದು ಹೇಳಿ ತನ್ನ ಅರಮನೆಯತ್ತ ತೆರಳಿದ. ಮುಂದಿನ ದಿನಗಳಲ್ಲಿ ಪ್ರಜೆಗಳಿಗೆ , ಸೈನಿಕರಿಗೆ ಉತ್ತಮ ನಾಯಕನಾಗಿ ರಾಜ್ಯಭಾರ ಮಾಡಿ ಹೆಸರುವಾಸಿಯಾದ.


(Comment on WhatsApp 9611311195)

ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ

    ***ಪುಟ್ಟನ ಗಾಡಿ*** ( ಮಕ್ಕಳ   ಕವನ ) ಪುಟ್ಟನ ಗಾಡಿ ಹೊರಟಿದೆ ನೋಡಿ ಬುರ್ ಬುರ್ ಗಾಡಿ ಮಾಡಿದೆ ಮೋಡಿ || ಚಾಲಕ ಇವನೆ ಪಯಣಿಗ ಒಬ್ಬನೆ ನಿಲ್ದಾಣ ನಮ್ಮನೆ ಹೊರಟಿತು ಮ...