ಗುರುವಾರ, ಸೆಪ್ಟೆಂಬರ್ 23, 2021

ಭಾರತೀಯರ ಸ್ವಗತ - ಕವಿತೆ - ವೆಂಕಟೇಶ ಚಾಗಿ




 **ಭಾರತೀಯರ ಸ್ವಗತ**


(ಕವಿತೆ)

ನಿಜ
ನಾವೆಲ್ಲಾ ಅವರ ಕುಡಿಗಳು
ಸ್ವಾತಂತ್ರ್ಯ ದ ಸವಿ ಹೀರುವವರು
ಆದರೂ ಕಿಂಚಿತ್ತೂ ಅರಿವಿಲ್ಲ ನಮಗೆ
ಸ್ವಾತಂತ್ರ್ಯಕ್ಕಾಗಿ ಹರಿದ 
ರಕ್ತದ ಬೆಲೆ ಕಣ್ಣೀರಿನ ಬೆಲೆ
ಅಪಾರ ಹೃದಯಗಳ ನೋವು ಕೂಡಾ.
ಈಗ ಮಾತುಗಳು ಕಿಡಿಗಳಾಗಿವೆ
ಅಂಧಕಾರದ ಅಧಿಕಾರದ ಗುಂಗಲ್ಲಿ
ಮನಸುಗಳು ಒಡೆಯುತ್ತಿವೆ
ಸ್ವಾತಂತ್ರ್ಯದ ಸವಿಯ ಸವಿಯದೆ..

ನಮಗೇನು ಗೊತ್ತು ಆ ತ್ಯಾಗ ಆ ಬಲಿದಾನ
ಆ ವಿಧವೆಯರ ರೋಧನ
ಅನಾಥರಾದ ಮಕ್ಕಳ ಆಕ್ರಂದನ
ಬಡತನದ ಹಸಿವಿಂದಲೆ ಹೋರಾಟದ
ಕಿಚ್ಚು ಉಂಡವರ ರೋಷಾವೇಷ
ಎಲ್ಲ ಮರೆತಾಗಿದೆ ಎಲ್ಲ ಮರೆಯಾಗಿದೆ
ಬಡತನದ ಮೂಸೆಯಲಿ 
ಹಸಿವಿನ ಆಕ್ರಂದನ ಹೆಚ್ಚಾಗಿದೆ
ಮಹಿಳೆಯರ ಅನಾಥರ 
ಸ್ವಾತಂತ್ರ್ಯ ಇನ್ನೂ ಮರೆಯಾಗಿದೆ..

ನಮಗೇನು ಗೊತ್ತು ಮನೆ ಮಠಗಳ
ಬಿಟ್ಟು ಬಂದವರ ಹೋರಾಟದ ಹಸಿವು?
ಬೂಟುಗಾಲಿನ ಒದೆತದ ನೋವು
ಲಾಟಿ ಏಟಿನಿಂದಾದ ಬರೆಗಳ ಗುರುತು
ಸ್ವಾತಂತ್ರ್ಯದ ಹೋರಾಟದಲಿ ಗಾಯಗೊಂಡು
ಚಿಕಿತ್ಸೆ ಉಪಚಾರವಿಲ್ಲದೇ
ನೋವಿನಲಿ ಚೀರುತ್ತಿತದ್ದ ಮನಸುಗಳ ನೋವು.
ಇಲ್ಲ 
ಯಾವುದೂ ಅರಿವಿಲ್ಲ
ತಂದೆ ತಾಯಿಯರ ಶ್ರಮದ ಅರಿವಿಲ್ಲದ
ದುಷ್ಟ ಮಕ್ಕಳಂತೆ..

ಇದೇ ಏನು ಅವರು ಕಂಡ ಕನಸು ?
ದಂಗೆಗಳು ದ್ವೇಷ ಗಳು ಕ್ರೌರ್ಯ ದಬ್ಬಾಳಿಕೆ
ಸ್ವರ್ಥದ ಪರಮಾವಧಿಯಲ್ಲಿ
ಭರತಮಾತೆಯ ಸ್ವತ್ತನ್ನೇ ಹರಾಜಿಡುವುದು
ಹುಚ್ಚು ಲೆಕ್ಕಾಚಾರದಲ್ಲಿ ಬಡವರ
ರಕ್ತ ಹೀರುವುದು..
ಶಾಂತಿ ನೆಮ್ಮದಿ ಸಹಕಾರ ಸಹಬಾಳ್ವೆಯ 
ಕ್ಷೀರಕೆ ವಿಷವ ಬೆರೆಸುವುದು.
ಮರೆತಿದ್ದೇವೆ ,
ಆ ಉಸಿರು ನುಡಿದ ಏಕತೆಯ ಮಾತನ್ನು
ಸ್ವಾತಂತ್ರ್ಯದ ಖುಷಿಯನ್ನು...

ಈಗಲಾದರೂ ಬನ್ನಿ
ಅವರು ಕಂಡ ಕನಸುಗಳ ಬದುಕಿಸೋಣ
ನನಸಾಗಿಸಲು
ಹುಚ್ಚು ಬ್ರಾಂತಿಯ ಬಿಟ್ಟು
ಏಕತೆಯ ಸಮರ ಸಾರೋಣ
ವಿಷಜಂತುಗಳ ಸರ್ವನಾಶಕೆ 
ಸಮರ ಸಾರೋಣ ಬೇಧ ಭಾವವಿಲ್ಲದೇ.
ಸ್ವಾತಂತ್ರ್ಯಕೆ ಹೋರಾಡಿದ ಆತ್ಮಗಳಿಗೆ
ಹೋರಾಟದ ತೃಪ್ತಿಯ ಉಣಿಸೋಣ.

=> ವೆಂಕಟೇಶ ಚಾಗಿ
ಲಿಂಗಸುಗೂರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ

ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ

    ***ಪುಟ್ಟನ ಗಾಡಿ*** ( ಮಕ್ಕಳ   ಕವನ ) ಪುಟ್ಟನ ಗಾಡಿ ಹೊರಟಿದೆ ನೋಡಿ ಬುರ್ ಬುರ್ ಗಾಡಿ ಮಾಡಿದೆ ಮೋಡಿ || ಚಾಲಕ ಇವನೆ ಪಯಣಿಗ ಒಬ್ಬನೆ ನಿಲ್ದಾಣ ನಮ್ಮನೆ ಹೊರಟಿತು ಮ...