ಭಾನುವಾರ, ಜುಲೈ 28, 2024
ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ
***ಪುಟ್ಟನ ಗಾಡಿ***
(ಮಕ್ಕಳ ಕವನ)
ಪುಟ್ಟನ ಗಾಡಿ
ಹೊರಟಿದೆ ನೋಡಿ
ಬುರ್ ಬುರ್ ಗಾಡಿ
ಮಾಡಿದೆ ಮೋಡಿ ||
ಚಾಲಕ ಇವನೆ
ಪಯಣಿಗ ಒಬ್ಬನೆ
ನಿಲ್ದಾಣ ನಮ್ಮನೆ
ಹೊರಟಿತು ಮನೆಮನೆ ||
ಧ್ವನಿಯದು ಜೋರು
ನಡುಗಿತು ಸೂರು
ಕಾಗದದ ಚೂರು
ಕಾಸಿನ ಜಾರು ||
ಹುರಿಗಡ್ಲೆ ಚಟಪಟ
ಬಾಯಲಿ ಕಟಕಟ
ಮರೆತನು ಊಟ
ಮಾಡುವ ಟಾಟಾ ||
ಗಡಿಬಿಡಿ ಪುಟ್ಟ
ರಾಜನ ಪಟ್ಟ
ಏರುವ ಬೆಟ್ಟ
ಹೆದರದ ದಿಟ್ಟ ||
=> ವೆಂಕಟೇಶ ಚಾಗಿ
ಶನಿವಾರ, ಜುಲೈ 20, 2024
ಮಕ್ಕಳ ಕವನ | ಕಾಮನಬಿಲ್ಲು | ವೆಂಕಟೇಶ ಚಾಗಿ | children's song | kamanabillu | venkatesh chagi
ಕಾಮನಬಿಲ್ಲು
ಏಳು ಬಣ್ಣದ ಕಾಮನಬಿಲ್ಲು
ನೋಡಲು ಎಷ್ಟು ಸುಂದರ
ಸಂಜೆ ಬಾನಿಗೆ ಅಂದಚಂದ
ಭೂಮಿಯೆ ದೇವರ ಮಂದಿರ ||
ತುಂತುರು ಹನಿಗಳ ತಂದಾನ
ದೇವರು ನೀಡಿದ ಅಭಿದಾನ
ಮೋಡದ ನಡುವೆ ರವಿ ಬಂದ
ಕಾಮನಬಿಲ್ಲನು ನೋಡುತ ನಿಂತ ||
ಎಲೆಯ ಮೇಲಿನ ಹನಿಯಲ್ಲಿ
ಕಾಮನಬಿಲ್ಲನು ನಾ ಕಂಡೆ
ಅಮ್ಮನ ಕರೆದು ಬಣ್ಣಗಳೆಣಿಸಿ
ಬೊಗಸೆಯಲ್ಲಿ ಹಿಡಿದುಕೊಂಡೆ ||
ಬಂದರು ಗೆಳೆಯರು ಅಂಗಳಕೆ
ಕಾಮನಬಿಲ್ಲನು ನೋಡಲಿಕೆ
ಕೆಕೆಯ ಹಾಕಿ ಬಂಡೆಯ ಏರಿ
ಜಿಗಿದೆವು ಎಲ್ಲರೂ ಆಕಾಶಕ್ಕೆ ||
ಸೂರ್ಯನು ಈಗ ಮುಳುಗಿದನು
ಅಮ್ಮನ ಮಡಿಲನು ಸೇರಿದನು
ಕಾಮನ ಬಿಲ್ಲದು ಮರೆಯಾಯ್ತು
ನಮ್ಮಯ ಕಣ್ಣಲಿ ಸೆರೆಯಾಯ್ತು ||
=> ವೆಂಕಟೇಶ ಚಾಗಿ
=> ವೆಂಕಟೇಶ ಚಾಗಿ
Comment on WhatsApp : 9611311195)
ಮಂಗಳವಾರ, ಜುಲೈ 16, 2024
ಮಕ್ಕಳ ಕವನ | ಹಾರುವ ಹಕ್ಕಿ | ವೆಂಕಟೇಶ ಚಾಗಿ
***ಹಾರುವ ಹಕ್ಕಿ***
ಕವಿ : ವೆಂಕಟೇಶ ಚಾಗಿ
ಆಗಸದಲ್ಲಿ ಹಾರುತಿರುವ
ಸುಂದರ ಹಕ್ಕಿಯ ನೋಡಲ್ಲಿ
ಹಕ್ಕಿ ಜೊತೆಗೆ ಹಾರುತಿರುವ
ಹಕ್ಕಿಗಳಿಂಡು ನೋಡಲ್ಲಿ ||
ಕವಿ : ವೆಂಕಟೇಶ ಚಾಗಿ
ಒಂದರ ಹಿಂದೆ ಸಾಲಲಿ ಹಾರುತ
ಹೊರಟಿವೆ ಎಲ್ಲೆಡೆ ಕೇಳೋಣ
ನಮಗೂ ರೆಕ್ಕೆಗಳನು ಕೊಟ್ಟರೆ
ಈಗಲೇ ಬಾನಿಗೆ ಹಾರೋಣ ||
ಕವಿ : ವೆಂಕಟೇಶ ಚಾಗಿ
ಬಣ್ಣ ಬಣ್ಣದ ಹೂಗಳ ಕಂಡು
ಸಂತಸದಿಂದ ನಲಿಯೋಣ
ಪುಟ್ಟ ಪುಟ್ಟ ಹಸಿರು ಗಿಡಗಳ
ಹೆಸರನು ಕೂಗಿ ಕರೆಯೋಣ ||
ಕವಿ : ವೆಂಕಟೇಶ ಚಾಗಿ
ಹತ್ತಿರ ಕಂಡರೂ ದೂರದಿ ಇರುವರು
ಬಾನಿನ ಚುಕ್ಕಿ ಚಂದಿರ
ಎಲ್ಲರ ಜೊತೆಗೆ ಹಾಡುತಿರಲು
ಭೂಮಿಯು ಸುಂದರ ಮಂದಿರ ||
ಕವಿ : ವೆಂಕಟೇಶ ಚಾಗಿ
ಸಂಜೆಯ ವೇಳೆಗೆ ಹಕ್ಕಿಗಳೆಲ್ಲಾ
ಗೂಡನು ಸೇರಲು ಹೊರಡುವವು
ರಾತ್ರಿಯ ಕನಸಲಿ ಎಲ್ಲವೂ ಬಂದು
ಚಂದದ ಕಥೆಗಳ ಹೇಳುವವು ||
=> ವೆಂಕಟೇಶ ಚಾಗಿ
=> ವೆಂಕಟೇಶ ಚಾಗಿ
Comment on WhatsApp : 9611311195)
ಸೋಮವಾರ, ಜುಲೈ 15, 2024
ಮಕ್ಕಳ ಕವನ | ಮೊದಲ ಮಳೆ | ವೆಂಕಟೇಶ ಚಾಗಿ
*ಮೊದಲ ಮಳೆ**
ಇಳೆಗೆ ಬಂತು ಮೊದಲ ಮಳೆ
ನೆಲಕೆ ತಂತು ಹೊಸತು ಕಳೆ
ಚಿಗುರು ಮೂಡಲೆಂಥ ಮೋಡಿ
ಇಂಥ ಸೊಬಗ ಎಲ್ಲ ನೋಡಿ ||
ಬಳಲಿದಂಥ ಮರಗಳಲ್ಲಿ
ಬಿಸಿಲನುಂಡ ಗೂಡುಗಳಲಿ
ಮತ್ತೆ ಬಂತು ಹೊಸತನ
ಕೇಳ ಬನ್ನಿ ತನತನ ||
ದೇವನೆಂಥ ಮೋಡಿಗಾರ
ಜೀವ ತರುವ ಜಾದುಗಾರ
ಬಾನ ತುಂಬ ಹಕ್ಕಿ ಆಟ
ನರನು ಕಲಿಯಲಾರ ಪಾಠ ||
ಸಾಲು ಸಾಲು ಮರಗಳಲ್ಲಿ
ಪುಟ್ಟ ಪುಟ್ಟ ಹಕ್ಕಿ ಗೂಡುಗಳಲಿ
ದಿನವೂ ಒಂದು ಬೇರೆ ಹಬ್ಬ
ಸೊಬಗ ನೋಡು ಹತ್ತಿ ದಿಬ್ಬ ||
ಜಗವ ಬೆಳಗೊ ದಿನಕರ
ಹರಸಿ ನಗುವ ಶುಭಕರ
ಚುಕ್ಕಿ ತಾರೆ ಚಂದ್ರರೆಲ್ಲ
ಭುವಿಯ ನೋಡ ಬರುವರಲ್ಲ ||
ಇಳೆಗೆ ಮಳೆಯು ಬರುತಲಿರಲಿ
ಜಗಕೆ ಹರುಷ ತರುತಲಿರಲಿ
ಇದುವೆ ಸ್ವರ್ಗ ಮರೆಯದಿರಿ
ಹಸಿರು ಅಳಿಸಿ ಮರುಗದಿರಿ ||
=> ವೆಂಕಟೇಶ ಚಾಗಿ
=> ವೆಂಕಟೇಶ ಚಾಗಿ
Comment on WhatsApp : 9611311195)
ಗುರುವಾರ, ಜುಲೈ 4, 2024
ಗಜಲ್ | ಸಖಿ | ವೆಂಕಟೇಶ ಚಾಗಿ
ಗಜಲ್
ನಿನ್ನ ಮಾತುಗಳ ಮಧುರ ಗುಂಗನ್ನು ನಾನೆಂದೂ ಕಳೆದುಕೊಳ್ಳಲಾರೆ ಸಖಿ
ಕಳೆದು ಹೋದ ದಿನಗಳು ದಿನದಿಂದ ದಿನಕ್ಕೆ ಮತ್ತಷ್ಟು ದೂರವಾಗಬಹುದು
ನಿನ್ನೊಂದಿಗೆ ಕಳೆದ ಕ್ಷಣಗಳ ಸವಿಯ ಮತ್ತೆಂದೂ ಕಾಣಲಾರೆ ಸಖಿ
ನಮ್ಮಿಬ್ಬರ ಪ್ರೀತಿಯ ಆ ಕಾಮನಬಿಲ್ಲು ಮುದಿತನವ ಮುಡಿದಿರಬಹುದು
ಮಡಿವಂತಿಕೆಯ ಸೋಗಿಗೆ ಹೆದರಿ ನಿನ್ನ ಪ್ರೀತಿಯನೆಂದು ಮರೆಯಲಾರೆ ಸಖಿ
ಗಹನವಾಗಿರುವ ಬದುಕಿನೊಳಗೆ ಕತ್ತಲೆಯ ಛಾಯೆ ಆವರಿಸಿರಬಹುದು
ನಿನ್ನ ಕಣ್ಣ ಬೆಳಕಿನ ಕಾಂತಿಯ ನಾನೆಂದೂ ಹೊರಗೆ ಹರಿಸಲಾರೆ ಸಖಿ
ಮುದುಡುತಿರುವ ಈ ಕವಿಗೆ ನೀನೆಂದಿಗೂ ಸದಾ ಸೂರ್ಯರಶ್ಮಿಯಂತೆ
ನನ್ನ ಉಸಿರು ಇರುವ ತನಕ ನಿನ್ನ ಪ್ರೀತಿಯ ಋಣವ ನಾನೆಂದೂ ತೀರಿಸಲಾರೆ ಸಖಿ
ಬುಧವಾರ, ಜುಲೈ 3, 2024
ಗಜಲ್ | ಅಲೆಯ ಮೇಲೆ | ವೆಂಕಟೇಶ ಚಾಗಿ
ಗಜಲ್
ಏನು ಮರೆಯಲಿ ನಿನ್ನ ನೆನಪುಗಳ ಅಲೆಯ ಮೇಲೆ
ಏನು ನುಡಿಯಲಿ ನನ್ನ ಕನಸುಗಳ ಸುಳಿಯ ಮೇಲೆ
ಮನದ ಅಂಬರದ ಮೇಲೆ ನಿನ್ನ ನಗುವಿನ ಚಿತ್ತಾರ
ಏನು ಚಿತ್ರಿಸಲಿ ನಿನ್ನ ನಗುವಿನ ಅಂದದ ಮೇಲೆ
ಕಾಣದೂರಿನಲ್ಲಿ ಈ ಮನಸು ನಿನಗಾಗಿ ಅಲೆಯುತ್ತಿದೆ
ಏನು ಹುಡುಕಲಿ ನಿನ್ನ ವಿಳಾಸದ ಪತ್ರದ ಮೇಲೆ
ನಶ್ವರ ಬದುಕಿನೊಳಗೊಂದು ಸುಂದರ ದೀಪ ನೀನು
ಏನು ಬೆಳಗಲಿ ನಿನ್ನ ಕಣ್ಣೋಟದ ಬೆಳಕಿನ ಮೇಲೆ
ಅಪರೂಪದ ಖಜಾನೆಯು ಈ 'ಕವಿ'ಗೆ ದೊರೆತಿದೆ
ಏನು ಗಳಿಸಲಿ ನಿನ್ನ ಸೌಂದರ್ಯದ ನಗೆಯ ಮೇಲೆ
ಮಂಗಳವಾರ, ಜುಲೈ 2, 2024
ಗಜಲ್ | ಹಾಜರಿ ಇಲ್ಲದೆ | ವೆಂಕಟೇಶ ಚಾಗಿ
**ಗಜಲ್**
ಮಳೆ ಸುರಿಸದೇ ಮೇಘವು ಹಠ ಹಿಡಿದಾಗಿದೆ ನಿನ್ನ ಹಾಜರಿ ಇಲ್ಲದೆ
ಕಾಮನಬಿಲ್ಲಿನ ಬಣ್ಣಗಳು ಬಣ್ಣ ಕಳೆದಾಗಿದೆ ನಿನ್ನ ಹಾಜರಿ ಇಲ್ಲದೆ
ಸೋನೆ ಮಳೆಯು ಮೌನರಾಗ ಹಾಡುವುದನು ಮರೆತು ಮಂಕಾಗಿದೆ
ತಂಗಾಳಿಯಲಿ ನನ್ನ ಬಿಸಿಯುಸಿರು ತಂಪಾಗಿದೆ ನಿನ್ನ ಹಾಜರಿ ಇಲ್ಲದೆ
ಕನಸುಗಳು ತುಂಬಾ ದಿನಗಳ ನಂತರ ರಜೆಯೊಳಗೆ ಮುಳುಗಿವೆ
ನನಸಾಗುವ ಕನಸುಗಳು ಶುಭ ಗಳಿಗೆಯ ಮರೆತಾಗಿದೆ ನಿನ್ನ ಹಾಜರಿ ಇಲ್ಲದೆ
ಹೂವಿನ ಮಕರಂದಕ್ಕಾಗಿ ಬರುವ ಬಡ ದುಂಬಿಗಳಿಗೂ ದಿಗಿಲಾಗಿದೆ
ಪರಿಮಳವು ಕೂಡ ತನ್ನ ಕಂಪು ಕಳೆದುಕೊಂಡಾಗಿದೆ ನಿನ್ನ ಹಾಜರಿ ಇಲ್ಲದೆ
ಮುತ್ತಿನ ಹೊತ್ತು ಮೆಲ್ಲ ಮೆಲ್ಲನೆ ಜಾರಿ ಮನದನ್ನೆಯನುನು ಅಪ್ಪುತ್ತಿದೆ
ಕವಿಯ ಗುಡಿಸಲರಮನೆಯಲ್ಲೂ ಕತ್ತಲಾಗಿದೆ ನಿನ್ನ ಹಾಜರಿ ಇಲ್ಲದೆ |
=> ವೆಂಕಟೇಶ ಚಾಗಿ
Comment on WhatsApp : 9611311195)
ಸೋಮವಾರ, ಜುಲೈ 1, 2024
ಕವಿತೆ | ಬಾಡಿಗೆ ಮನೆ | ವೆಂಕಟೇಶ ಚಾಗಿ
**ಬಾಡಿಗೆ ಮನೆ**
ದೇವರಿಗೊಂದು ಮನೆ ಕಟ್ಟಲಾಗಿದೆ
ಅದು ಬಾಡಿಗೆ ಮನೆ
ಮನೆಯೊಳಗೋ ಮೌನ ಬರಿಮೌನ
ದೇವರು ಮಾತ್ರ ಪ್ರಸನ್ನ
ಬೆಳಕಿನಲ್ಲಿ ಬೆಳಕು ಮೂಡಿಸಿ
ದೇವರು ನಗುತ್ತಿದ್ದಾನೆ..
ಕೆಲವು ಕಣ್ಣುಗಳು ದೇವರನ್ನು ಕಂಡು
ಕಣ್ಣೀರು ಸುರಿಸುತ್ತಿವೆ
ಮತ್ತೆ ಕೆಲವು ಕಣ್ಣುಗಳು
ದೇವರ ಸೌಂದರ್ಯವನು
ಕಣ್ಣತುಂಬ ತುಂಬಿಕೊಳ್ಳುತ್ತಿವೆ
ಬಾಡಿಗೆ ಮನೆಯ ತುಂಬಾ
ಆಸೆ ಆಮೀಷಗಳು ತುಂಬಿ ತುಳುಕುತಿವೆ
ದೇವರಿಗಷ್ಟೇ ಅಲ್ಲ
ಉಸಿರಾಡುವ ಕಲ್ಲುಗಳಲ್ಲೂ ಸಹ
ಗೋಡೆಯ ಮೇಲಿನ ಬಡವರು
ನಗುತ್ತಾ ನಗುತ್ತಾ ಅಳುತ್ತಿದ್ದಾರೆ
ಗ್ರಹಣ ಗ್ರಹಗತಿಗಳು
ಕಳ್ಳಕಾಕರೆಂದರೆ ದೇವರಿಗೂ ಭಯ
ನಗ ನಾಣ್ಯಗಳ ವ್ಯಾಮೋಹ
ಮುನಿಸು ಸಂತೃಪ್ತಿಗಳು ಮತ್ತಷ್ಟು
ಬಾಡಿಗೆ ಮನೆಗೊಮದು ದೊಡ್ಡಬೀಗ
ಆದರೂ ದೇವರಿಗೆ ಸಾಂತ್ವಾನ
ದೇವರು ಎಲ್ಲೆಡೆಯೂ ಇದ್ದಾನೆ
ರೋಗ ರುಜಿನಗಳು
ದೇವರಿಗೂ ಬರಬಹುದು
ದೇವರಿಗೆ ಮಾತ್ರ ಪರಿಶುದ್ಧತೆಯ ಕಾಳಜಿ
ಮೊರೆಯಿಡುವ ಖಾಲಿಕೈಗಳು
ನೂರಾರು ಸಾವಿರಾರು
ದೇವರು ಮಾತ್ರ ಸದಾ ಹಸನ್ಮುಖಿ
ತನ್ನ ಮನೆಗೆ ತಾನೇ ಬಾಡಿಗೆ ಕಟ್ಟುತ..
ದೇವರಿಗೂ ನಿಯಮಗಳ ಬಂಧನ
ಸಂಸಾರದ ತಾಪತ್ರಯಗಳಿಗಿಂತಲೂ
ಬಾಡಿಗೆ ಮನೆಯೊಳಗೆ ಅಧಿಕ
ದೇವರು ಎಲ್ಲವನೂ ಮರೆತಂತಿದೆ
ಇತಿಹಾಸದ ಪುಟಗಳಲ್ಲಿ ಅಮರ
ಮತ್ತೆ ಹೊಸ ಹುಟ್ಟು ಹೊಸ ಹೆಸರು
ಅದೇ ಬಾಡಿಗೆ ಮನೆಯಲ್ಲಿ..
ವೆಂಕಟೇಶ ಚಾಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ
***ಪುಟ್ಟನ ಗಾಡಿ*** ( ಮಕ್ಕಳ ಕವನ ) ಪುಟ್ಟನ ಗಾಡಿ ಹೊರಟಿದೆ ನೋಡಿ ಬುರ್ ಬುರ್ ಗಾಡಿ ಮಾಡಿದೆ ಮೋಡಿ || ಚಾಲಕ ಇವನೆ ಪಯಣಿಗ ಒಬ್ಬನೆ ನಿಲ್ದಾಣ ನಮ್ಮನೆ ಹೊರಟಿತು ಮ...
-
*ಮೊದಲ ಮಳೆ** ಇಳೆಗೆ ಬಂತು ಮೊದಲ ಮಳೆ ನೆಲಕೆ ತಂತು ಹೊಸತು ಕಳೆ ಚಿಗುರು ಮೂಡಲೆಂಥ ಮೋಡಿ ಇಂಥ ಸೊಬಗ ಎಲ್ಲ ನೋಡಿ || ಬಳಲಿದಂಥ ಮರಗಳಲ್ಲಿ ಬಿಸಿಲನುಂಡ ಗೂಡುಗಳಲಿ ಮತ್ತೆ...
-
***ಹಾರುವ ಹಕ್ಕಿ*** ಕವಿ : ವೆಂಕಟೇಶ ಚಾಗಿ ಆಗಸದಲ್ಲಿ ಹಾರುತಿರುವ ಸುಂದರ ಹಕ್ಕಿಯ ನೋಡಲ್ಲಿ ಹಕ್ಕಿ ಜೊತೆಗೆ ಹಾರುತಿರುವ ಹಕ್ಕಿಗಳಿಂಡು ನೋಡಲ್ಲಿ || ಕವಿ : ವೆಂಕಟೇ...
-
ಕಾಮನಬಿಲ್ಲು ಏಳು ಬಣ್ಣದ ಕಾಮನಬಿಲ್ಲು ನೋಡಲು ಎಷ್ಟು ಸುಂದರ ಸಂಜೆ ಬಾನಿಗೆ ಅಂದಚಂದ ಭೂಮಿಯೆ ದೇವರ ಮಂದಿರ || ತುಂತುರು ಹನಿಗಳ ತಂದಾನ ದೇವರು ನೀಡಿದ ಅಭಿದಾನ ಮೋಡದ ನಡುವ...