ಸೋಮವಾರ, ಜುಲೈ 15, 2024

ಮಕ್ಕಳ ಕವನ | ಮೊದಲ ಮಳೆ | ವೆಂಕಟೇಶ ಚಾಗಿ

 



 *ಮೊದಲ ಮಳೆ**



ಇಳೆಗೆ ಬಂತು ಮೊದಲ ಮಳೆ
ನೆಲಕೆ ತಂತು ಹೊಸತು ಕಳೆ
ಚಿಗುರು ಮೂಡಲೆಂಥ ಮೋಡಿ
ಇಂಥ ಸೊಬಗ ಎಲ್ಲ ನೋಡಿ ||

ಬಳಲಿದಂಥ ಮರಗಳಲ್ಲಿ
ಬಿಸಿಲನುಂಡ ಗೂಡುಗಳಲಿ
ಮತ್ತೆ ಬಂತು ಹೊಸತನ
ಕೇಳ ಬನ್ನಿ ತನತನ ||

ದೇವನೆಂಥ ಮೋಡಿಗಾರ
ಜೀವ ತರುವ ಜಾದುಗಾರ
ಬಾನ ತುಂಬ ಹಕ್ಕಿ ಆಟ
ನರನು ಕಲಿಯಲಾರ ಪಾಠ ||

ಸಾಲು ಸಾಲು ಮರಗಳಲ್ಲಿ
ಪುಟ್ಟ ಪುಟ್ಟ ಹಕ್ಕಿ ಗೂಡುಗಳಲಿ
ದಿನವೂ ಒಂದು ಬೇರೆ ಹಬ್ಬ
ಸೊಬಗ ನೋಡು ಹತ್ತಿ ದಿಬ್ಬ ||

ಜಗವ ಬೆಳಗೊ ದಿನಕರ
ಹರಸಿ ನಗುವ ಶುಭಕರ
ಚುಕ್ಕಿ ತಾರೆ ಚಂದ್ರರೆಲ್ಲ
ಭುವಿಯ ನೋಡ ಬರುವರಲ್ಲ ||

ಇಳೆಗೆ ಮಳೆಯು ಬರುತಲಿರಲಿ
ಜಗಕೆ ಹರುಷ ತರುತಲಿರಲಿ
ಇದುವೆ ಸ್ವರ್ಗ ಮರೆಯದಿರಿ
ಹಸಿರು ಅಳಿಸಿ ಮರುಗದಿರಿ ||


ಗುರುವಾರ, ಜುಲೈ 4, 2024

ಗಜಲ್ | ಸಖಿ | ವೆಂಕಟೇಶ ಚಾಗಿ

 



ಗಜಲ್


ನಿನ್ನ ನೆನಪುಗಳ ಅರಮನೆಯಿಂದ ನಾನೆಂದೂ ಹೊರಬರಲಾರೆ ಸಖಿ
ನಿನ್ನ ಮಾತುಗಳ ಮಧುರ ಗುಂಗನ್ನು ನಾನೆಂದೂ ಕಳೆದುಕೊಳ್ಳಲಾರೆ ಸಖಿ

ಕಳೆದು ಹೋದ ದಿನಗಳು ದಿನದಿಂದ ದಿನಕ್ಕೆ ಮತ್ತಷ್ಟು ದೂರವಾಗಬಹುದು
ನಿನ್ನೊಂದಿಗೆ ಕಳೆದ ಕ್ಷಣಗಳ ಸವಿಯ ಮತ್ತೆಂದೂ ಕಾಣಲಾರೆ ಸಖಿ

ನಮ್ಮಿಬ್ಬರ ಪ್ರೀತಿಯ ಆ ಕಾಮನಬಿಲ್ಲು ಮುದಿತನವ ಮುಡಿದಿರಬಹುದು
ಮಡಿವಂತಿಕೆಯ ಸೋಗಿಗೆ ಹೆದರಿ ನಿನ್ನ ಪ್ರೀತಿಯನೆಂದು ಮರೆಯಲಾರೆ ಸಖಿ

ಗಹನವಾಗಿರುವ ಬದುಕಿನೊಳಗೆ ಕತ್ತಲೆಯ ಛಾಯೆ ಆವರಿಸಿರಬಹುದು
ನಿನ್ನ  ಕಣ್ಣ ಬೆಳಕಿನ ಕಾಂತಿಯ ನಾನೆಂದೂ ಹೊರಗೆ ಹರಿಸಲಾರೆ ಸಖಿ

ಮುದುಡುತಿರುವ ಈ ಕವಿಗೆ ನೀನೆಂದಿಗೂ ಸದಾ ಸೂರ್ಯರಶ್ಮಿಯಂತೆ
ನನ್ನ ಉಸಿರು ಇರುವ ತನಕ ನಿನ್ನ ಪ್ರೀತಿಯ ಋಣವ ನಾನೆಂದೂ ತೀರಿಸಲಾರೆ ಸಖಿ 



=> ವೆಂಕಟೇಶ ಚಾಗಿ
Comment on WhatsApp : 9611311195)



ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ

    ***ಪುಟ್ಟನ ಗಾಡಿ*** ( ಮಕ್ಕಳ   ಕವನ ) ಪುಟ್ಟನ ಗಾಡಿ ಹೊರಟಿದೆ ನೋಡಿ ಬುರ್ ಬುರ್ ಗಾಡಿ ಮಾಡಿದೆ ಮೋಡಿ || ಚಾಲಕ ಇವನೆ ಪಯಣಿಗ ಒಬ್ಬನೆ ನಿಲ್ದಾಣ ನಮ್ಮನೆ ಹೊರಟಿತು ಮ...