ಶನಿವಾರ, ನವೆಂಬರ್ 14, 2026

ಒಳಿತು ಮಾಡು ಮನುಷ...!! | ಲೇಖನ | ವೆಂಕಟೇಶ ಚಾಗಿ | olitu maadu manuja | lekhana | venkatesh chagi | article



 "ಒಳಿತು ಮಾಡು ಮನುಷ...!!"


ಲೇಖನ


 ಅದೊಂದು ಅರಮನೆ. ಸುಂದರವಾದ ಅರಮನೆ. ಆ ಅರಮನೆಯಂಥ ಮನೆ ಮನೆ ಆ ಪ್ರದೇಶದ ಸುತ್ತಮುತ್ತ ಎಲ್ಲಿಯೂ ಇರಲಿಲ್ಲ . ಅರಮನೆಯಲ್ಲಿ ನಗ ನಾಣ್ಯ ಹೇರಳವಾಗಿ ಇತ್ತು . ಆ ಅರಮನೆಯಲ್ಲಿ ಒಬ್ಬ ರಾಜ ಇದ್ದ.

ಅವನು ತುಂಬಾ ಲೋಭಿಯಾಗಿದ್ದ. ಜನರಿಂದ ಹೆಚ್ಚು ಹೆಚ್ಚು ಕರ ಸಂಗ್ರಹಿಸಿ ಅರಮನೆಯಲ್ಲಿ ಶೇಖರಿಸಿ ಇಡುತ್ತಿದ್ದ. ಬಂಧುಗಳಿಗೆ , ಗೆಳೆಯರಿಗೆ , ಅತಿಥಿಗಳಿಗೆ ಉಪಚಾರ ಮಾಡಿದರೆ ತನ್ನ ಸಂಪತ್ತು ಕರಗುತ್ತದೆ ಎಂಬ ಭಾವನೆಯಿಂದ ಅರಮನೆಗೆ ಯಾರನ್ನೂ ಕರೆಯುತ್ತಿರಲಿಲ್ಲ. ಸೇವಕರಿಗೆ ಕನಿಷ್ಠ ಸಂಬಳವನ್ನು ನೀಡುತ್ತಿದ್ದ. 


 ರಾಜನ ಬಗ್ಗೆ ಎಲ್ಲರಿಗೂ ಅಸಮಾಧಾನ ಇದ್ದೇ ಇತ್ತು. ಆದರೂ ರಾಜಾ ಪ್ರತ್ಯಕ್ಷ ದೇವತಃ ಎನ್ನುವಂತೆ ರಾಜನಿಗೆ ಮರ್ಯಾದೆ ಕೊಡುತ್ತಿದ್ದರು. ವೈರಿಗಳಿಂದ ರಾಜನನ್ನು ರಕ್ಷಿಸುತ್ತಿದ್ದರು. ಹೀಗಿರುವಾಗ ರಾಜನಿಗೆ ಅದಾವುದೊ ಗಂಬೀರ ಕಾಯಿಲೆ ತಗುಲಿ ನರಳತೊಡಗಿದನು. ರಾಜನ ಮೇಲಿನ ಅಸಮಾಧಾನದಿಂದಾಗಿ ರಾಜನನ್ನು  ಮಂತ್ರಿಗಳು ಸೇವಕರು ನಿರ್ಲಕ್ಷಿಸಿದರು. ರಾಜ ಹಣ ಕೊಡುತ್ತೇನೆಂದರೂ ಒಳ್ಳೆಯ ವೈದ್ಯರು ಅವನಿಗೆ ಚಿಕಿತ್ಸೆ ನೀಡಲು ಮುಂದೆ ಬರಲಿಲ್ಲ. ಕೊನಗೆ ರಾಜ ಕಾಯಿಲೆ ಹಾಗು ಒಂಟಿತನದ ನೋವಿನಿಂದ ನರಳುತ್ತಾ ಸತ್ತುಹೋದ.

ಇಲ್ಲಿ ರಾಜ ಕೂಡಿಟ್ಟದ್ದು ಸಂಪತ್ತು ಮಾತ್ರ.  ಸಂಪತ್ತೇ ಶ್ರೇಷ್ಠ ಎಂಬ ಭಾವನೆ ರಾಜನಲ್ಲಿತ್ತು. ಆದರೆ ಅವನ ಕಷ್ಟ ಕಾಲದಲ್ಲಿ ತಾನು ಕೂಡಿಟ್ಟ ಸಂಪತ್ತು ಅವನ ಸಹಾಯಕ್ಕೆ ಬರಲಿಲ್ಲ. ತನ್ನ ನಡವಳಿಕೆಯಿಂದ ದೂರಾದ ಜನರೂ ಸಹ ಅವನ ಹತ್ತಿರ ಸುಳಿಯಲಿಲ್ಲ. ಕೊನೆಗೆ ತಾನು ಕೂಡಿಟ್ಟ ಸಂಪತ್ತನ್ನೇಲ್ಲ ಬಿಟ್ಟು ಹೋಗಬೇಕಾಯಿತು. 

ನಮ್ಮ ಜೀವನವೇ ರಾಜನಂತೆ ಆಗಿದೆ.

ಜೀವನ ಪರ್ಯಂತ ಜೀತದಾಳುಗಳಂತೆ ದುಡಿಯುವ ಕಾರ್ಖಾನೆಗಳಾಗಿದ್ದೇವೆ. ಪ್ರೀತಿ ,ವಾತ್ಸಲ್ಯ, ಬಂಧುತ್ವ, ಸ್ನೇಹ , ಸಹೋದರತ್ವ ಮುಂತಾದ ಮಾನವೀಯ ಗುಣಗಳನ್ನು ಕ್ಷೀಣವಾಗಿಸಿಕೊಳ್ಳುತ್ತಿದ್ದೇವೆ. ಬದುಕಲು ಗಳಿಕೆ ಅವಶ್ಯಕ. ಗಳಿಕೆ ಎಂದರೆ ಕೇವಲ ಹಣ ಮಾತ್ರ ಅಲ್ಲ. ಮನಸ್ಸುಗಳ ಗಳಿಕೆಯೂ ಸೇರಿದೆ.

 ದುಡಿಯುವುದರಿಂದ ಹಣ ಗಳಿಕೆಯಾದರೆ ಮಾನವೀಯ ಮೌಲ್ಯಗಳಿಂದ ಮನಸ್ಸುಗಳ ಗಳಿಕೆಯಾಗುತ್ತದೆ. ಇಲ್ಲಿ ಎರಡೂ ಅವಶ್ಯಕ. ಹಣ ಗಳಿಕೆಯಲ್ಲಿ ಲೋಭಿತನ ಹೆಚ್ಚಾದರೆ ಅದು ನಕಾರಾತ್ಮಕ ದಿಕ್ಕಿನೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಆದರೆ ಮನಸುಗಳ ಗಳಿಕೆಯು ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ.

 ಶ್ರೀಮಂತನೊಬ್ಬ ಬಂಗಲೆಯಲ್ಲಿ ಒಂಟಿಯಾಗಿ ಬದುಕಿ ಸತ್ತರೂ  ಅವನು ಅದೇ ಮನೆಯಲ್ಲಿ ಶವವಾಗಿ ಕೆಲವು ದಿನಗಳ ನಂತರ ಹೇಗೋ ಹೊರಜಗತ್ತಿಗೆ ವಿಷಯ ತಿಳಿದಂತಹ ಹಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಹಾಗೆಯೇ ಒಬ್ಬ ಹೃದಯವಂತನ ಎಲ್ಲಾ ಕಾರ್ಯಗಳಲ್ಲಿ ಜನ ಸಾಗರ ಸೇರುವುದನ್ನು ನೋಡಿದ್ದೇವೆ.

ಭಾರಿ ಪ್ರವಾಹದಿಂದಾಗಿ ಬಂಗಲೆಯೊಂದು ಕೊಚ್ಚಿಕೊಂಡು ಹೋಗುವ ಹಾಗೆ ಸಂಪತ್ತು ಖಾಲಿಯಾಗಿ ಬೀದಿಗೆ ಬರು ಪರಿಸ್ಥಿತಿ ಉಂಟಾಗಬಹುದು. ಆದರೆ ಹೃದಯ ಸಂಪತ್ತು ಎಂದಿಗೂ ಕರಗುವುದಿಲ್ಲ ನಾಶವಾಗುವುದಿಲ್ಲ. ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಯ ಅವಶ್ಯಕತೆ ತುಂಬಾ ಇದೆ. ಮಾನವ ಧರ್ಮ ಸಂಸ್ಕೃತಿ ಪರಿಸರದ ಉಳಿವಿಗೆ ತೀರ ಅವಶ್ಯ. ಹೃದಯವಂತ ಶ್ರೀಮಂತಿಕೆ ಬೆಳೆಯಲಿ  ಮಾನವ ಧರ್ಮ ಉಳಿಯಲಿ.



✍ ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ